1944 ವೆಸ್ಟ್ ಇಂಡಿಸ್‍ನ ಪ್ರಸಿದ್ಧ ಕ್ರಿಕೆಟ್ ಆಟಗಾರ. ಎಡಗೈ ಬ್ಯಾಟ್ಸ್‍ಮನ್ ಹಾಗೂ ಬಲಗೈ ಮೀಡಿಯಂ ವೇಗದ ಲೆಗ್‍ಬ್ರೇಕ್ ಬೌಲರ್. ಕವರ್ ಪಾಯಿಂಟ್ ಹಾಗೂ ಸ್ಲಿಪ್‍ಗಳಲ್ಲಿ ಅಪ್ರತಿಮ ಫೀಲ್ಡರ್. ಬ್ರಿಟಿಷ್ ಗಯಾನದ ಜಾರ್ಜ್‍ಟೌನ್‍ನ ಕ್ವೀನ್ಸ್ ಟೌನ್‍ನಲ್ಲಿ 1944 ಆಗಸ್ಟ್ 31ರಂದು ಜನಿಸಿದ. ಬ್ರಿಟಿಷ್ ಗಯಾನ, ಗಯಾನ ಲಂಕಾಷೈರ್ ಮತ್ತು ವೆಸ್ಟ್ ಇಂಡಿಸ್ ತಂಡಗಳ ಪರವಾಗಿ ಆಡಿದ್ದಾನೆ. ಅತ್ಯುತ್ತಮ ದೇಹದಾಢ್ರ್ಯ ಹೊಂದಿದ್ದ. ಈತ ಬಲವಾದ ಹೊಡೆತಗಳಿಗೆ ಹೆಸರಾಗಿದ್ದ. ಸಾಮಾನ್ಯವಾಗಿ ಆಟಗಾರರು 2 ಪೌಂಡ್ 2 ಔನ್ಸ್ ಅಥವಾ 2 ಪೌಂಡ್ 3 ಔನ್ಸ್ ತೂಕದ ಬ್ಯಾಟನ್ನು ಬಳಸಿದರೆ ಈತ 3 ಪೌಂಡ್ ತೂಕದ ಬ್ಯಾಟ್ ಬಳಸುತ್ತಿದ್ದ. ಇದರ ಹಿಡಿಗೆ ಮೂರು ರಬ್ಬರ್ ಗ್ರಿಪ್‍ಗಳಿರುತ್ತಿದ್ದುವು. 
ಬಾಲ್ಯದಲ್ಲಿ ದುಡಿಮೆಯ ಜೊತೆಗೆ ಕ್ರಿಕೆಟ್ ಅಭ್ಯಾಸದಲ್ಲಿ ತೊಡಗಿದ್ದ. ಭಾರತದ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನಾಡಿದ (1966-67). ಸಿಡ್ನಿಯಲ್ಲಿ ಆಸ್ಟ್ರೇಲಿಯದ ವಿರುದ್ಧ ಕೊನೆಯ ಟೆಸ್ಟ್ ಪಂದ್ಯವನ್ನಾಡಿದ (1984-85). ವೆಸ್ಟ್ ಇಂಡಿಸ್ ಇಂಗ್ಲೆಂಡ್ ಪ್ರವಾಸ ಕೈಗೊಂಡ ತಂಡದಲ್ಲಿ ಈತನಿಗೆ ಸ್ಥಾನ ದೊರಕಲಿಲ್ಲ (1966). ತರುವಾಯ ಬೇಸರದಿಂದ ಲಂಕಾಷೈರ್ ತಂಡ ಸೇರಿದ (1968). ಅನಂತರ ವೆಸ್ಟ್ ಇಂಡಿಸ್ ತಂಡದ ನಾಯಕನಾದ (1974-75). ಅತಿ ಹೆಚ್ಚು ಟೆಸ್ಟ್ ಇನ್ನಿಂಗ್ಸ್ ಆಡಿದ ದಾಖಲೆ ನಿರ್ಮಿಸಿದ (1966-74). 

2 ಗಂಟೆಗಳಲ್ಲಿ ದ್ವಿಶತಕ ಬಾರಿಸಿ (ಮೊದಲ ಶತಕ 80 ನಿಮಿಷಗಳಲ್ಲಿ ಎರಡನೆಯ ಶತಕ 40 ನಿಮಿಷಗಳಲ್ಲಿ) ಜೆಸ್ಸೋಪ್‍ನ ದಾಖಲೆಯನ್ನು ಸರಿಗಟ್ಟಿದ (1976). ವೆಸ್ಟ್ ಇಂಡೀಸ್ 74 ಟೆಸ್ಟ್‍ಗಳಲ್ಲಿ ಆಡಿ 36ರಲ್ಲಿ ಗೆಲುವು ಬರುವಂತೆ ಮಾಡಿದ್ದು ಈತನ ಮಹತ್ ಸಾಧನೆ. 1988-89ರಲ್ಲಿ ಆಸ್ಟ್ರೇಲಿಯ ಪ್ರವಾಸದಲ್ಲಿ ವೆಸ್ಟ್ ಇಂಡಿಸ್ ತಂಡದ ಮೇನೇಜರ್ ಆಗಿ ನೇಮಕಗೊಂಡ. ವೆಸ್ಟ್ ಇಂಡಿಸ್ ತಂಡದ ನಾಯಕನಾಗಿ ವಿಶ್ವಕಪ್ ಗೆದ್ದ (1975). 1983ರ ವೇಳೆಗೆ 6,000 ಟೆಸ್ಟ್ ರನ್‍ಗಳಿಸಿದ್ದ. ಅತಿ ಹೆಚ್ಚು ಟೆಸ್ಟ್‍ಗಳಲ್ಲಿ ನಾಯಕತ್ವ ವಹಿಸಿ ಅತಿಹೆಚ್ಚು ರನ್ ಗಳಿಸಿದ್ದು ಮತ್ತು ಸತತವಾಗಿ 36 ಪಂದ್ಯಗಳನ್ನು ಗೆದ್ದಿದ್ದು ಈತನ ದಾಖಲೆ. ಸುನಿಲ್ ಗಾವಸ್ಕರ್, ಬಾಯ್ಕಾಟ್, ಗ್ಯಾರಿ ಸೋಬರ್ಸ್ ಮತ್ತು ಕಾಡ್ರೆಯವರಂತೆ ಈತನೂ 110 ಕ್ಕೂ ಹೆಚ್ಚು ಟೆಸ್ಟ್‍ಗಳನ್ನಾಡಿದ್ದಾನೆ.

ಟೋನಿ ಗೋಜಿಯರ್ ಜೊತೆ ‘ಲಿವಿಂಗ್ ಫಾರ್ ಕ್ರಿಕೆಟ್’ (1980) ಮತ್ತು ಮಿಹಿರ್ ಬೋಸ್ ಜೊತೆ ‘ವಿನ್ನಿಂಗ್ ಕ್ಯಾಪ್ಟನ್ಸಿ’ (1995) ಎಂಬ ಕೃತಿಗಳನ್ನು ಪ್ರಕಟಿಸಿದ್ದಾನೆ.	
(ಡಿ.ಎನ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ